

ಕಾರ್ಕಳ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಪರಿಸರವು ಜೀವವೈವಿಧ್ಯ, ದಟ್ಟ ಅರಣ್ಯ ಹಾಗೂ ನೈಸರ್ಗಿಕ ಜಲಮೂಲಗಳಿಂದ ಸಮೃದ್ಧವಾಗಿರುವ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿರುವ ಈ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ಅನಗತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಆಗಸ್ಟ್ 1ರಂದು ಖಾಸಗಿ ಸಂಸ್ಥೆಯೊಂದು ಕಬ್ಬಿನಾಲೆ ಪರಿಸರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ನೂರಾರು ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಇದು ಸೂಕ್ಷ್ಮ ಪರಿಸರವನ್ನು ಕೆಡಿಸುವ ಕಾರ್ಯಕ್ರಮವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಧಿಕೃತ ಪ್ರವಾಸಿ ತಾಣವಾಗಿರದ ಕಬ್ಬಿನಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕೆಲವರು ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಸ್ಥಳೀಯರ ನೆಮ್ಮದಿಗೂ ಧಕ್ಕೆಯಾಗುತ್ತಿದೆ. ಪ್ರವಾಸಿಗರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದಗಳು ನಡೆಯುತ್ತಿರುವ ಘಟನೆಗಳೂ ವರದಿಯಾಗಿವೆ.
ಜಲಪಾತ ಹಾಗೂ ನೀರಿನ ಪ್ರದೇಶಗಳಲ್ಲಿ ಅಪಾಯದ ಅರಿವಿಲ್ಲದೆ ಸಾಹಸಕ್ಕೆ ಮುಂದಾಗುವ ಪ್ರವಾಸಿಗರಿಂದ ಅಪಘಾತಗಳು ಸಂಭವಿಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಕಬ್ಬಿನಾಲೆ ಪ್ರದೇಶದಲ್ಲಿ ನೀರಿನಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆ ಹಾಗೂ ಮೃತದೇಹಗಳನ್ನು ಹೊರತೆಗೆದು ತರುವ ಹೊಣೆಗಾರಿಕೆಯೂ ಸ್ಥಳೀಯರ ಮೇಲೆಯೇ ಬೀಳುತ್ತಿದ್ದು, ಇದರಿಂದ ಅವರ ಜೀವಕ್ಕೂ ಅಪಾಯ ಎದುರಾಗುತ್ತಿದೆ.
ಸ್ಥಳೀಯರ ಆರೋಪದಂತೆ, ಕೆಲವು ಖಾಸಗಿ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಚಾರಣ, ರ್ಯಾಲಿ ಹಾಗೂ ಕಾಡಿನತ್ತ ನಡಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ, ದೂರದ ನಗರಗಳಿಂದ ಪ್ರವಾಸಿಗರನ್ನು ಕರೆತಂದು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ. ಈ ಮೂಲಕ ಕಬ್ಬಿನಾಲೆ ಪರಿಸರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಭಾರ ಆರ್‌ಎಫ್‌ಒ ರೂಪೇಶ್ ಚೌಹಾನ್ ಅವರು, "ವನ್ಯಜೀವಿ ಪ್ರದೇಶದಲ್ಲಿ ಸದ್ಯ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇಲ್ಲ. ನಿಯಮ ಉಲ್ಲಂಘಿಸಿ ಯಾವುದೇ ಕಾರ್ಯಕ್ರಮ ನಡೆದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಪರಿಸರವಾದಿ ಆರತಿ ಅಶೋಕ್ ಮಾಳ ಅವರು, "ಕಬ್ಬಿನಾಲೆಯಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಪರಿಸರದ ಹೆಸರಿನಲ್ಲಿ ಅನಧಿಕೃತ ಚಟುವಟಿಕೆಗಳು ನಡೆದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು," ಎಂದು ಆಗ್ರಹಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.