


ಮಂಗಳೂರು:** ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್–ಅಡ್ಡಹೊಳೆ ಚತುಷ್ಪಥ ರಸ್ತೆಯ ವಳಾಲು–ನೀರಕಟ್ಟೆ ಬಳಿ ನಿರ್ಮಿಸಲಾಗಿರುವ ಟೋಲ್ ಪ್ಲಾಝಾದಲ್ಲಿ ನವೆಂಬರ್ 26ರಿಂದ ಶುಲ್ಕ ವಸೂಲಿ ಆರಂಭವಾಗಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಈ ಟೋಲ್‌ನಿಂದಾಗಿ ಅಡ್ಡಹೊಳೆ, ಹಾಸನ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ.
NHAI ನಿಗದಿಪಡಿಸಿರುವ ದರದಂತೆ ಕಾರು, ವ್ಯಾನ್‌ಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ ಹಿಂದಿರುಗುವ ಪ್ರಯಾಣಕ್ಕೆ 205 ರೂ. ಶುಲ್ಕ ವಿಧಿಸಲಾಗುತ್ತದೆ. ಲಘು ವಾಣಿಜ್ಯ ವಾಹನಗಳಿಗೆ 220 ರೂ., ಎರಡು ಆಕ್ಸಲ್ ಬಸ್ ಮತ್ತು ಟ್ರಕ್‌ಗಳಿಗೆ 465 ರೂ., ಮೂರು ಆಕ್ಸಲ್ ವಾಹನಗಳಿಗೆ 510 ರೂ. ಹಾಗೂ ಭಾರೀ ವಾಹನಗಳಿಗೆ 730ರಿಂದ 890 ರೂ.ವರೆಗೆ ಶುಲ್ಕ ನಿಗದಿಪಡಿಸಲಾಗಿದೆ.
ಟೋಲ್ ಪ್ಲಾಝಾದ ಎಂಟು ಲೇನ್‌ಗಳ ಪೈಕಿ ಆರು ಲೇನ್‌ಗಳನ್ನು ಫಾಸ್ಟ್‌ಟ್ಯಾಗ್ ವಾಹನಗಳಿಗೆ ಮೀಸಲಿಡಲಾಗಿದೆ. ಉಳಿದ ಲೇನ್‌ಗಳಲ್ಲಿ ನಗದು ಪಾವತಿಗೆ ಅವಕಾಶವಿಲ್ಲ. ಫೋನ್‌ಪೇ, ಗೂಗಲ್ ಪೇ ಸೇರಿದಂತೆ ಡಿಜಿಟಲ್ ಪಾವತಿ ಮೂಲಕ ಶುಲ್ಕ ಪಾವತಿಸಬಹುದು ಎಂದು ನಿರ್ವಹಣಾ ಗುತ್ತಿಗೆ ಪಡೆದಿರುವ ಕೋರಲ್ ಸಂಸ್ಥೆ ತಿಳಿಸಿದೆ.
ಟೋಲ್‌ನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ಲಘು ಮೋಟಾರು ವಾಹನಗಳ ಮಾಲೀಕರಿಗೆ ತಿಂಗಳಿಗೆ 360 ರೂ. ಸ್ಥಳೀಯ ಪಾಸ್ ಹಾಗೂ 1,500 ರೂ. ವಾರ್ಷಿಕ ಪಾಸ್ ಸೌಲಭ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 63.6 ಕಿ.ಮೀ. ಉದ್ದದ ಬಿ.ಸಿ.ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.