


ಕಾರ್ಕಳ, ಏ.10: ತಾಲೂಕಿನ ಅಜೆಕಾರು ಪದ್ಮನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಉದ್ಘಾಟನೆ ಮತ್ತು ಅದೇ ಪ್ರದೇಶದಲ್ಲಿರುವ ಸಂಪೂರ್ಣ ಶಿಲಾಮಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏಪ್ರಿಲ್ 10ರಿಂದ 14ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವವಾಗಿ ನಡೆಯಲಿದೆ.
ಉತ್ಸವದ ಅಂಗವಾಗಿ ಏಪ್ರಿಲ್ 10ರಂದು ಕುಕ್ಕುಂದೂರು ಗಣಿತನಗರ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಅಜೆಕಾರು ರಾಮಮಂದಿರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಜರುಗಲಿದ್ದು, ಬಳಿಕ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಏಪ್ರಿಲ್ 11ರಂದು ನವಗ್ರಹ ಯಾಗ, ಅಥರ್ವಶಿರ್ಷ ಮಹಾಗಣಯಾಗ, ಗಣಪತಿ ದೇವರ ಬಿಂಬ ಶುದ್ಧಿ ನಡೆಯಲಿದ್ದು, ಸಂಜೆ ಬ್ರಹ್ಮಕಲಶ ಮಂಡಲ ರಚನೆ, ಮಂಡಲ ಪೂಜೆ ಹಾಗೂ ಬಿಂಬ ಶಯ್ಯಾದಿವಾಸ ನಡೆಯಲಿದೆ.
ಮುಖ್ಯ ಕಾರ್ಯಕ್ರಮವಾಗಿರುವ ಏಪ್ರಿಲ್ 12ರಂದು ಹೋಮ, ಶಿಖರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಕಲ್ಪೋಕ್ತ ಪೂಜೆ ಮತ್ತು ಮಹಾಪೂಜೆ ನೆರವೇರಲಿದೆ. ಬೆಳಗ್ಗೆ 11ರಿಂದ ಶ್ರೀ ವಿಷ್ಣು ಸಹಸ್ರನಾಮ ಪಠಣ ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಈ ದಿನ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಫಲಪುಷ್ಪ ಸಮರ್ಪಣೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೋಹನ್ ಆಳ್ವ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 11ರಂದು ಸಂಜೆ ಜಗದೀಶ ಆಚಾರ್ಯ ಪುತ್ತೂರು ಮತ್ತು ತಂಡದಿಂದ ಭಕ್ತಿ ಗಾನ ವೈಭವ ನಡೆಯಲಿದೆ. ಏಪ್ರಿಲ್ 12ರಂದು ಆಧ್ಯಾ ಮಲ್ಯ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ಸಂಜೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಏಪ್ರಿಲ್ 13 ಮತ್ತು 14ರಂದು ಭಜನ ಸುಧಾ ಕಾರ್ಯಕ್ರಮಗಳು ಜರುಗಲಿವೆ.
ಇದೇ ಸಂದರ್ಭದಲ್ಲಿ ಏಪ್ರಿಲ್ 14ರಂದು ಸಂಜೆ 5.30ಕ್ಕೆ ಪದ್ಮನಗರದ ಶಿಕ್ಷಣೋತ್ಸಾಹಿ ಪದ ಜಿ. ಶೆಟ್ಟಿ ಅವರ ಜನಶತಮಾನೋತ್ಸವದ ಅಂಗವಾಗಿ ಜ್ಞಾನಸುಧಾ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಲೋಕಾರ್ಪಣೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನೀಲ್ ಕುಮಾರ್ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪದವಿ ಪೂರ್ವ ಕಾಲೇಜನ್ನು ಉದ್ಘಾಟಿಸಲಿದ್ದಾರೆ. ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗವನ್ನು ಡಾ| ಮೋಹನ್ ಆಳ್ವ ಉದ್ಘಾಟಿಸಲಿದ್ದು, ನಿಟ್ಟೆ ಡಾ| ವಿಶಾಲ್ ಹೆಗ್ಡೆ ಮತ್ತು ಉದ್ಯಮಿ ಶಿವರಾಮ್ ಜಿ. ಶೆಟ್ಟಿ ಪ್ರಯೋಗಶಾಲೆಯನ್ನು ಉದ್ಘಾಟಿಸಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.