


ನವದೆಹಲಿ/ಬೆಂಗಳೂರು: ಟ್ರಾಫಿಕ್ ಜಾಮ್‌ಗೆ ಕುಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಮತ್ತೊಮ್ಮೆ ಸಂಚಾರ ದಟ್ಟಣೆ ವಿಚಾರವಾಗಿ ಸುದ್ದಿಯಾಗಿದೆ. ದೇಶದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂಬ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ.
ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿಯಾದ ಟಾಮ್‌ಟಾಮ್ ಪ್ರಕಟಿಸಿರುವ 2025ರ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯ ಕುರಿತು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ವರದಿ ಪ್ರಕಾರ, ಬೆಂಗಳೂರಿನಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತದೆ.
ಇನ್ನು ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ವಾಹನ ಸವಾರರು ವರ್ಷಕ್ಕೆ ಸರಾಸರಿ 168 ಗಂಟೆ, ಅಂದರೆ ಸುಮಾರು ಏಳು ದಿನಗಳನ್ನು ಟ್ರಾಫಿಕ್‌ನಲ್ಲೇ ಕಳೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ ಪೀಕ್ ಅವರ್‌ಗಳಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 13.9 ಕಿಲೋಮೀಟರ್‌ಗೆ ಇಳಿಯುತ್ತದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯೂ ಇದೆ.
ದೇಶದ ಇತರ ಪ್ರಮುಖ ನಗರಗಳ ಪೈಕಿ ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದ್ದು, ಪುಣೆ ಮೂರನೇ ಸ್ಥಾನದಲ್ಲಿದೆ. ಪುಣೆಯಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 33 ನಿಮಿಷ 20 ಸೆಕೆಂಡ್ ಬೇಕಾಗುತ್ತದೆ.
ವಿಶ್ವದ ವಿವಿಧ ನಗರಗಳ ಸಂಚಾರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಟಾಮ್‌ಟಾಮ್ ಸಂಸ್ಥೆ ಪ್ರತಿವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. 2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿ ಹೊರಹೊಮ್ಮಿದ್ದು, ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.