

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಒಂದು ವರ್ಷದವರೆಗೆ ಜಾಮೀನು ಅರ್ಜಿ ಸಲ್ಲಿಸದಂತೆ ನೀಡಿದ್ದ ಆದೇಶದಲ್ಲಿ ತಿದ್ದುಪಡಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ತಿರಸ್ಕರಿಸಿದೆ.
ತುರ್ತು ಸಂದರ್ಭಗಳಲ್ಲಿ ಜಾಮೀನು ಕೋರುವ ಅವಕಾಶ ನೀಡುವಂತೆ ದರ್ಶನ್ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ, ಅದನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ವಕೀಲರಿಗೆ ಮಾಹಿತಿ ನೀಡಿ ಅರ್ಜಿಯನ್ನು ತಿರಸ್ಕರಿಸಿದೆ.
ಇದಕ್ಕೂ ಮೊದಲು ಕಳೆದ ಮೇ 15ರಂದು ನ್ಯಾಯಮೂರ್ತಿಗಳಾದ ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠದಲ್ಲಿ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ಈ ವೇಳೆ ದರ್ಶನ್ ಪರ ವಕೀಲರು, ಜೈಲಿನಲ್ಲಿ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಇತರ ಕೈದಿಗಳೊಂದಿಗೆ ಮಾತನಾಡಲು ಅವಕಾಶವಿಲ್ಲ. ಕುಟುಂಬ ಸದಸ್ಯರನ್ನು ಗಾಜಿನ ತಡೆಗೋಡೆಯ ಮೂಲಕ ಮಾತ್ರ ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಪೀಠ, ಕ್ವಾರಂಟೈನ್ ಸೆಲ್ ಕೂಡ ಜೈಲಿನ ಭಾಗವೇ ಆಗಿದ್ದು, ವಿಶೇಷ ಸೌಲಭ್ಯ ದೊರೆಯದಂತೆ ಮಾಡುವ ಉದ್ದೇಶದಿಂದ ಅಲ್ಲಿ ಇರಿಸಿರಬಹುದು ಎಂದು ಅಭಿಪ್ರಾಯಪಟ್ಟಿತ್ತು. ಜೈಲು ನಿಯಮಾವಳಿಯ ಪ್ರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಲಾಗುವುದು ಎಂದೂ ತಿಳಿಸಿತ್ತು.
ಇದೇ ವೇಳೆ, ವಿಚಾರಣಾ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ಆ ಅವಧಿಯವರೆಗೆ ದರ್ಶನ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ಆದೇಶದಲ್ಲಿ ತಿದ್ದುಪಡಿ ಕೋರಿ ಸಲ್ಲಿಸಿದ್ದ ಅರ್ಜಿಯೂ ತಿರಸ್ಕೃತವಾಗಿರುವುದರಿಂದ, ನ್ಯಾಯಾಲಯದ ಹಿಂದಿನ ಆದೇಶದಂತೆ ಮುಂದಿನ ವರ್ಷದ ಮೇ 15ರವರೆಗೆ ದರ್ಶನ್ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.