ಮಂಗಳೂರು: ಕಥೋಲಿಕ್ ಉದ್ಯಮಿ, ವೃತ್ತಿಪರ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ನೀಡುವ ರಚನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಅಕ್ಟೋಬರ್ 5ರಂದು ನೆರವೇರಿತು. ಸಮಾರಂಭದಲ್ಲಿ ಐವರು ಸಾಧಕರಾದ ವೃತ್ತಿಪರ ಕ್ಷೇತ್ರದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಉದ್ಯಮ ಕ್ಷೇತ್ರದಲ್ಲಿ ಬೆಂಗಳೂರಿನ ಆಸ್ಟಿನ್ ರೋಚ್, ಕೃಷಿ ಕ್ಷೇತ್ರದಲ್ಲಿ ಮಂಗಳೂರಿನ ಡಾ| ಗಾಡ್ವಿನ್ ರೊಡ್ರಿಗಸ್ ಬೆಳ್ವಾಯಿ, ಅನಿವಾಸಿ ಉದ್ಯಮಿ ದುಬೈಯ ಪ್ರತಾಪ್ ಮೆಂಡೋನ್ಸಾ, ಮಹಿಳಾ ಸಾಧಕಿ ಶೋಭಾ ಮೆಂಡೊನ್ಸಾ ಅವರಿಗೆ 2023-25ನೇ ಸಾಲಿನ ರಚನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, "ಸಾಧನೆ ಮಾಡಬೇಕೆಂದು ಅನೇಕರು ಪ್ರಯತ್ನಿಸುತ್ತಾರೆ. ಎಲ್ಲರಿಗೂ ಕೈಗೂಡುವುದಿಲ್ಲ. ಆದರೆ, ಅವರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ. ರಚನಾ ಸಂಸ್ಥೆ ಸೂಕ್ತ ಸಾಧಕರನ್ನೇ ಆಯ್ದುಕೊಂಡು ಗೌರವಿಸಿದೆ. ಸೂಕ್ತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೆ ಮತ್ತಷ್ಟು ಗೌರವ ಹೆಚ್ಚಾಗುವ ಜೊತೆಗೆ ಪುರಸ್ಕೃತರ ಜವಾಬ್ದಾರಿ ಹೆಚ್ಚಿದೆ. ದೇಶಕ್ಕೆ ಕೊಂಕಣಿ ಕೆಥೋಲಿಕರ ಕೊಡುಗೆ ಅವಿಸ್ಮರಣೀಯ. ರಾಜಕೀಯದಲ್ಲೂ ಕೊಂಕಣಿ ಕೆಥೋಲಿಕರು ಸಾಕಷ್ಟು ಸೇವೆ ನೀಡಿದ್ದಾರೆ. ಕ್ರೈಸ್ತರ ಉತ್ತಮ ಸೇವೆಯಿಂದಾಗಿ ಸಮುದಾಯವನ್ನು ಗುರುತಿಸುವ ಕೆಲಸವಾಗುತ್ತಿದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಜಾನ್ ಬಿ. ಮೊಂತೇರೊ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಉದ್ಯಮಿ ಜಾನ್ ಸುನಿಲ್, ಬೆಂಗಳೂರು ವಿ.ವಿ. ಮಾಜಿ ಕುಲಪತಿ, ಡೀನ್ ಮತ್ತು ನಿರ್ದೇಶಕಿ ಡಾ| ಸಿಂಥಿಯಾ ಮಿನೇಜಸ್, ರಚನಾ ಸಂಸ್ಥೆಯ ಕಾರ್ಯದರ್ಶಿ ವಿಜಯ್ ವಿ. ಲೋಬೋ, ಕೋಶಾಧಿಕಾರಿ ನೆಲ್ಸನ್ ಮೊಂತೇರೊ, ಉಪಾಧ್ಯಕ್ಷ ನವೀನ್ ಲೋಬೋ, ಸಂಘಟಕರಾದ ಯುಲಾಲಿಯಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.