


ಶಿಕಾರಿಪುರ: ಮದುವೆ ಬಳಿಕ ಅದ್ದೂರಿಯಾಗಿ ಬೀಗರ ಊಟ (ಬಾಡೂಟ) ಆಯೋಜಿಸುವ ಸಂಪ್ರದಾಯಕ್ಕೆ ಬರಗಾಲದ ಬಿಸಿ ತಟ್ಟಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತಾಲೂಕಿನ ಹರಗಿ ಗ್ರಾಮಸ್ಥರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಗ್ರಾಮದಲ್ಲಿ ಬೀಗರ ಊಟ ಆಯೋಜಿಸುವುದನ್ನು ನಿಷೇಧಿಸಿದ್ದಾರೆ.
ಬೀಗರ ಊಟ ಆಯೋಜಿಸುವವರಿಗೆ ₹1 ಲಕ್ಷ ಹಾಗೂ ಊಟಕ್ಕೆ ತೆರಳುವವರಿಗೆ ₹50 ಸಾವಿರ ದಂಡ ವಿಧಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಬರಗಾಲದಿಂದ ರೈತರು ಹಾಗೂ ಬಡ, ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
350ಕ್ಕೂ ಹೆಚ್ಚು ಕುಟುಂಬಗಳಿರುವ ಹರಗಿ ಗ್ರಾಮದಲ್ಲಿ ಮದುವೆ ಬಳಿಕ ನೂರಾರು ಮಂದಿಗೆ ಕುರಿ ಮಾಂಸದ ಊಟ ಹಾಕಿಸುವುದು ವಾಡಿಕೆಯಾಗಿತ್ತು. ಪ್ರತಿಷ್ಠೆಯ ಪೈಪೋಟಿಯಿಂದಾಗಿ ಬಡ ಕುಟುಂಬಗಳೂ ಸಾಲ ಮಾಡಿ ಬೀಗರ ಊಟ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಬೀಗರ ಊಟಕ್ಕೆ ₹2 ಲಕ್ಷದಿಂದ ₹15 ಲಕ್ಷದವರೆಗೆ ಖರ್ಚು ಮಾಡುವ ಪರಿಸ್ಥಿತಿ ಇದೆ. ಶಾಮಿಯಾನ, ದಿನಸಿ, ಅಡುಗೆ ಸೇರಿದಂತೆ ಹಲವು ವೆಚ್ಚಗಳು ಕುಟುಂಬಗಳಿಗೆ ಹೊರೆಯಾಗುತ್ತಿವೆ. ವಿಶೇಷವಾಗಿ ಹೆಣ್ಣು ಹೆತ್ತವರಿಗೆ ಮದುವೆಯ ಬಳಿಕ ಬೀಗರ ಊಟದ ಖರ್ಚು ಮತ್ತಷ್ಟು ಆರ್ಥಿಕ ಹೊರೆ ತಂದಿದೆ.
ಬರಗಾಲದ ಸಂದರ್ಭದಲ್ಲಿ ಸಂಪ್ರದಾಯಕ್ಕಿಂತ ಆರ್ಥಿಕ ಶಿಸ್ತು ಮುಖ್ಯ ಎಂಬ ಸಂದೇಶ ಸಾರಿರುವ ಹರಗಿ ಗ್ರಾಮಸ್ಥರ ಈ ನಿರ್ಧಾರ ಸುತ್ತಮುತ್ತಲಿನ ಗ್ರಾಮಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.