



ಗೋವು ಸೇವೆ ಭಾರತೀಯ ಸಂಸ್ಕೃತಿಯ ಹೃದಯಭಾಗವಾಗಿದ್ದು, ಗೋಮಾತೆಯ ಸಂರಕ್ಷಣೆ ಹಾಗೂ ಸೇವೆಯಿಂದ ನಾಡು ಸಮೃದ್ಧಿಯಾಗುತ್ತದೆ ಎಂದು ಮೂಡಬಿದರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ಅವರು ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆಬ್ರವರಿ 19ರಿಂದ 21ರ ತನಕ ನಡೆಯಲಿರುವ ಏಕಪ್ರವಿತ್ರ ಶ್ರೀಮನ್ನಾಗಮಂಡಲದ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗೋಧಾಮದಲ್ಲಿ ಡಾ. ರಾಮಕೃಷ್ಣ ಆಚಾರ್ಯರು ಕೃಷಿಯೊಂದಿಗೆ ಗೋವುಗಳ ಸೇವೆಯನ್ನು ಸಮರ್ಪಕವಾಗಿ ನಡೆಸಿ ಸಮಾಜದಲ್ಲಿ ಮನ್ನಣೆ ಪಡೆದಿದ್ದಾರೆ. ಗೋಸೇವೆಯ ಮೂಲಕ ರೈತನ ಬದುಕಿಗೆ ಗೌರವ ನೀಡುತ್ತಾ ‘ರೈತ ಪೀಠ’ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಬೆಳವಣಿಗೆ. ವಿಜ್ಞಾನ, ವೈಚಾರಿಕತೆ, ಕೃಷಿ ಹಾಗೂ ಆಧುನಿಕತೆಯನ್ನು ಪ್ರಕೃತಿಯ ಸೌಂದರ್ಯದೊಂದಿಗೆ ಸಮನ್ವಯಗೊಳಿಸಿ ಗೋಸಂರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುತ್ತಿರುವ ಶ್ರೀಮನ್ನಾಗಮಂಡಲ ಈ ಪ್ರದೇಶದ ಹೆಮ್ಮೆಯಾಗಿದೆ ಎಂದು ಮಹಾಸ್ವಾಮೀಜಿ ಹೇಳಿದರು.
ಮುನಿಯಾಲು ಗೋಧಾಮವು ಗೋಸೇವೆಯ ಜೊತೆಗೆ ನೈಸರ್ಗಿಕ ಕೃಷಿ, ರೈತರ ಸ್ವಾವಲಂಬನೆ ಹಾಗೂ ಪರಿಸರ ಸಂರಕ್ಷಣೆಗೆ ಮಹತ್ವ ನೀಡುತ್ತಿದ್ದು, ಇಂತಹ ಪ್ರಯತ್ನಗಳು ಸಮಾಜಕ್ಕೆ ದಾರಿದೀಪವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಮುನಿಯಾಲು ಗೋಧಾಮದ ಶ್ರೀಮನ್ನಾಗಮಂಡಲದ ರೂವಾರಿ ಹಾಗೂ ಸಂಸ್ಥಾಪಕರಾದ ಡಾ. ಜಿ. ರಾಮಕೃಷ್ಣ ಆಚಾರ್ಯರು, ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಗೋಧಾಮದ ಮುಖ್ಯಸ್ಥೆ ಸವಿತಾ ರಾಮಕೃಷ್ಣ ಆಚಾರ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಸ್ವಾಗತಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.