



ಹೆಬ್ರಿ : ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಹಾಗೂ ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಭಜನಾ ಸುವರ್ಣ ಸಂಭ್ರಮ ಹಾಗೂ ಋಕ್ ಸಂಹಿತಾಯಾಗ ಇಂದಿನಿಂದ (ಜನವರಿ ೨೮) ಫೆಬ್ರವರಿ ೦೬ರವರೆಗೆ ಭಕ್ತಿಭಾವದೊಂದಿಗೆ ನಡೆಯಲಿದೆ.
ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿ ಸುವರ್ಣ ಸಂಭ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ವಿವಿಧ ಉಪಸಮಿತಿಗಳ ಸದಸ್ಯರು, ಸ್ವಯಂಸೇವಕರು, ಸ್ಥಳೀಯ ಭಕ್ತರು ಹಾಗೂ ಭಜನಾ ಮಂಡಳಿಯ ಸದಸ್ಯರು ನಿರಂತರ ಶ್ರಮವಹಿಸುತ್ತಿದ್ದಾರೆ ಎಂದು ಭಜನಾ ಸುವರ್ಣ ಸಂಭ್ರಮದ ರೂವಾರಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ತಿಳಿಸಿದ್ದಾರೆ.
ಬುಧವಾರ ವಿಶೇಷ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಶ್ರೀದೆವರಿಗೆ ಪ್ರಧಾನ ಹೋಮ, ಕಲಶಾಭಿಷೇಕ, ನಾಗದೇವರು ಹಾಗೂ ಚಾಮುಂಡಿಗೆ ನವಕ ಪ್ರಧಾನ ಮತ್ತು ಕಲಶಾಭಿಷೇಕ, ನೂತನ ಭಜನಾ ಮಂದಿರದಲ್ಲಿ ವಾಸ್ತು ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ಋಕ್ ಸಂಹಿತಾಯಾಗದ ಅರಣೀಮಥನ ಹಾಗೂ ಅಗ್ನಿಜನನ ಬಳಿಕ ಅನ್ನಸಂತರ್ಪಣೆ ನಡೆಯಿತು. ಗುರುವಾರ ಪೂರ್ವ ಏಕಾದಶಿಯ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಜನವರಿ ೩೦ರಂದು ಭಜನಾ ಸುವರ್ಣ ಮಹೋತ್ಸವಕ್ಕೆ ಅಧಿಕೃತ ಚಾಲನೆ ಶುಕ್ರವಾರ ಮುಂಜಾನೆ ಭಜನೆಗೆ ಫಲನ್ಯಾಸ, ನಂತರ ಭಜನಾ ದೀಪ ಪ್ರಜ್ವಲನೆಯೊಂದಿಗೆ ಭಜನಾ ಸುವರ್ಣ ಸಂಭ್ರಮಕ್ಕೆ ಚಾಲನೆ ದೊರೆಯಲಿದೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ವಿವಿಧ ಭಜನಾ ಮಂಡಳಿಗಳಿಂದ ಪ್ರತಿದಿನ ಭಜನಾ ಸೇವೆ ನಡೆಯಲಿದೆ. ಇದೇ ದಿನದಿಂದ ಋಕ್ ಸಂಹಿತಾಯಾಗ ಆರಂಭಗೊಂಡು ಫೆಬ್ರವರಿ ೬ರವರೆಗೆ ನಡೆಯಲಿದೆ.
ಫೆಬ್ರವರಿ ೬ರಂದು ಮಂಗಲೋತ್ಸವ ಫೆಬ್ರವರಿ ೬ರಂದು ಋಕ್ ಸಂಹಿತಾಯಾಗದ ಪೂರ್ಣಾಹುತಿ ಹಾಗೂ ಭಜನಾ ಸುವರ್ಣ ಸಂಭ್ರಮದ ಮಂಗಲೋತ್ಸವ ನಡೆಯಲಿದೆ. ಬಳಿಕ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ ೩ ಗಂಟೆಗೆ ಧಾರ್ಮಿಕ ಸಭೆ ಹಾಗೂ ಗೌರವ ಸಮರ್ಪಣೆ ನಡೆಯಲಿದ್ದು, ಸಂಜೆ ೬ ಗಂಟೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್ ಕಾರ್ಕಳ, ಮಾಜಿ ಸಂಸದ ಪ್ರತಾಪಸಿಂಹ ಮೈಸೂರು, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಹಾಗೂ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.