logo
WhatsApp Image 2026-04-02 at 14.46.04.jpeg
hindalco everlast.jpeg

ಗಾಯನ ನಿಲ್ಲಿಸಿದ ಗಾನಕೋಗಿಲೆ : ಖ್ಯಾತ ಗಾಯಕಿ ಎಸ್ ಜಾನಕಿ ಇನ್ನಿಲ್ಲ

ಟ್ರೆಂಡಿಂಗ್
share whatsappshare facebookshare telegram
11 Jul 2026
post image

ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಶನಿವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ ಅವರು, ಮೂರನೇ ವಯಸ್ಸಿನಲ್ಲೇ ನಾದಸ್ವರ ವಿದ್ವಾಂಸ ಶ್ರೀ ಪೈದಿಸ್ವಾಮಿ ಅವರ ಬಳಿ ಸಂಗೀತಾಭ್ಯಾಸ ಆರಂಭಿಸಿದ್ದರು. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು, ಮುಂದೆ ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

1957ರಲ್ಲಿ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ 'ವಿಧಿಯಿನ್ ವಿಳಯಾಟ್ಟು' ಮೂಲಕ ಚಿತ್ರರಂಗಕ್ಕೆ ಗಾಯನ ಪ್ರವೇಶ ಮಾಡಿದರು. ಬಳಿಕ ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿ ಅಪಾರ ಜನಪ್ರಿಯತೆ ಗಳಿಸಿದರು.

ಕನ್ನಡ ಚಿತ್ರರಂಗಕ್ಕೂ ಎಸ್. ಜಾನಕಿ ಅವರ ಕೊಡುಗೆ ಅಪಾರವಾಗಿದೆ. 'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ', 'ಯುಗ ಯುಗಾದಿ ಕಳೆದರೂ', 'ಹೇಳೇ ಗೆಳತಿ ಬಾನಲ್ಲು ನೀನೆ ಭುವಿಯಲ್ಲು ನೀನೆ', 'ಬಿಸಿಲಾದರೇನು ಮಳೆಯಾದರೇನು' ಸೇರಿದಂತೆ ಅನೇಕ ಅಮರ ಗೀತೆಗಳಿಗೆ ಅವರು ಜೀವ ತುಂಬಿದ್ದರು. ಅವರ ಸುಮಧುರ ಕಂಠಸಿರಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ.

ಸಂಗೀತ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ರಾಜ್ಯ ಸರ್ಕಾರಗಳ ಪ್ರಶಸ್ತಿಗಳು ಹಾಗೂ ಅನೇಕ ಗೌರವಗಳಿಗೆ ಭಾಜನರಾಗಿದ್ದರು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತ್ತು.

ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿದ್ದರೂ, ದಕ್ಷಿಣ ಭಾರತೀಯ ಕಲಾವಿದರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕ ಗೌರವ ಸಿಗುತ್ತಿಲ್ಲ ಎಂಬ ಕಾರಣ ನೀಡಿ ಅವರು ಆ ಪ್ರಶಸ್ತಿಯನ್ನು ವಿನಯಪೂರ್ವಕವಾಗಿ ತಿರಸ್ಕರಿಸಿದ್ದರು.

ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕವು ತನ್ನ ಶ್ರೇಷ್ಠ ಗಾನಮಣಿಗಳಲ್ಲಿ ಒಬ್ಬರನ್ನು ಕಳೆದುಕೊಂಡಿದ್ದು, ಅವರ ಅಗಲಿಕೆಗೆ ಚಿತ್ರರಂಗ ಹಾಗೂ ಅಭಿಮಾನಿಗಳ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.