ಬೆಂಗಳೂರು: ಮೇ.1ರಂದು ನಡೆಯುವ ಕಾರ್ಮಿಕ ದಿನಾಚರಣೆಯಂದೇ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂದು ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಇತರರು ಬರುವುದು ಕಡಿಮೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವಗಳೂ ಪವಿತ್ರವೇ. ನಿಮ್ಮನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು. ಇದಕ್ಕಾಗಿ ಸೇವೆ ಕಾಯಂ ಮಾಡಲಾಗುವುದು. ಪೌರ ಕಾರ್ಮಿಕರ ಜೊತೆಗೆ ವಾಹನ ಚಾಲಕರ ಸೇವೆಯನ್ನೂ ಗುತ್ತಿಗೆಯಿಂದ ತೆಗೆದು ಕಾಯಂ ಮಾಡಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು. ವಿದ್ಯಾವಂತರಾದರೆ ಮಾತ್ರ ಸ್ವಾಭಿಮಾನಿಗಳಾಗಲು ಸಾಧ್ಯ. ಮಕ್ಕಳಿಗೆಲ್ಲಾ ಶಿಕ್ಷಣ ಕೊಡಿಸಿ, ಪ್ರತಿಯೊಬ್ಬರೂ ಪ್ರತಿಭಾವಂತರೇ. ಅವಕಾಶ ಸಿಗುವುದಷ್ಟೆ ಮುಖ್ಯ. ಅವಕಾಶ ಸಿಕ್ಕರೆ ಎಲ್ಲರೊಳಗಿನ ಪ್ರತಿಭೆ ಹೊರಗೆ ಬರುತ್ತದೆ. ಪೌರ ಕಾರ್ಮಿಕ ಸಮುದಾಯಕ್ಕೆ ನಗದು ರಹಿತ ಆರೋಗ್ಯ ಕಾರ್ಡ್ ನೀಡಲಾಗುವುದು. ಕಾರ್ಮಿಕರ ಸಿಂಧುತ್ವದ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.