logo
WhatsApp Image 2026-04-02 at 14.46.04.jpeg
hindalco everlast.jpeg

ಗೃಹಲಕ್ಷ್ಮಿ ಹಣದಿಂದ ಸಾಲದ ಕಂತು ಕಡಿತಕ್ಕೆ ಸರ್ಕಾರದ ಅಂಕುಶ, ಒಪ್ಪಿಗೆಯಿಲ್ಲದೆ ಕಡಿತಗೊಳಿಸಿದ ಹಣ ಮರುಪಾವತಿಗೆ ಸೂಚನೆ

ಟ್ರೆಂಡಿಂಗ್
share whatsappshare facebookshare telegram
10 Oct 2026
post image

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ₹2,000 ಸಹಾಯಧನವನ್ನು ಸಾಲದ ಕಂತು, ಬಡ್ಡಿ ಅಥವಾ ಇತರ ಬಾಕಿ ಮೊತ್ತಗಳಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಕರ್ನಾಟಕ ಸರ್ಕಾರ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಫಲಾನುಭವಿಗಳ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಕಡಿತಗೊಳಿಸಿರುವ ಹಣವನ್ನು ತಕ್ಷಣವೇ ಮರುಪಾವತಿಸುವಂತೆಯೂ ಸೂಚಿಸಿದೆ.

ಎಲ್ಲ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಈ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‌ಎಲ್‌ಬಿಸಿ) ಸಂಚಾಲಕರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಸೂಚನೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಾಲ ಮರುಪಾವತಿಗಾಗಿ ಬ್ಯಾಂಕುಗಳು ಕಡಿತಗೊಳಿಸುತ್ತಿವೆ ಎಂಬ ಮಹಿಳಾ ಫಲಾನುಭವಿಗಳ ದೂರುಗಳ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಖಾತರಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿ ಸರ್ಕಾರ ಕ್ರಮ ಕೈಗೊಂಡಿದೆ.

ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ, ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಹಣವನ್ನು ಸಾಲದ ಬಾಕಿಗಾಗಿ ಸ್ವಯಂಚಾಲಿತವಾಗಿ ಕಡಿತಗೊಳಿಸದಂತೆ ಅಥವಾ ಹೊಂದಾಣಿಕೆ ಮಾಡಿಕೊಳ್ಳದಂತೆ ಎಲ್ಲ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಲು ಸೂಚಿಸಲಾಗಿದೆ. ಇಂತಹ ಕಡಿತಗಳನ್ನು ತಡೆಯಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಬ್ಯಾಂಕ್ ಶಾಖೆಗಳ ಸಿಬ್ಬಂದಿಗೂ ಸ್ಪಷ್ಟ ಸೂಚನೆ ನೀಡುವಂತೆ ನಿರ್ದೇಶಿಸಲಾಗಿದೆ.

ಫಲಾನುಭವಿಗಳ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಸಾಲದ ಬಾಕಿಗಾಗಿ ಕಡಿತಗೊಳಿಸಿರುವ ಹಣವನ್ನು ಅವರ ಖಾತೆಗಳಿಗೆ ಮರುಜಮೆ ಮಾಡಬೇಕು ಎಂದು ಸರ್ಕಾರ ತಿಳಿಸಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ.

ಎಲ್ಲ ಹಣಕಾಸು ಸಂಸ್ಥೆಗಳು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಬೇಕು ಎಂದು ಎಸ್‌ಎಲ್‌ಬಿಸಿ ಸಂಚಾಲಕರಿಗೆ ಸೂಚಿಸಲಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಕೌಟುಂಬಿಕ ವೆಚ್ಚ, ಮಕ್ಕಳ ಶಿಕ್ಷಣ ಹಾಗೂ ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ಉದ್ದೇಶ ಹೊಂದಿದೆ. ಆದರೆ, ಬ್ಯಾಂಕುಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳು ಸಹಾಯಧನವನ್ನು ಕಡಿತಗೊಳಿಸುತ್ತಿರುವುದರಿಂದ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ ಎಂದು ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದರು.

ಇದಲ್ಲದೆ, ಸಾಲ ವಸೂಲಾತಿ ಹೆಸರಿನಲ್ಲಿ ಫಲಾನುಭವಿಗಳಿಗೆ ಬೆದರಿಕೆ ಹಾಕುವುದು ಸೇರಿದಂತೆ ಬಲವಂತದ ಕ್ರಮಗಳನ್ನು ಅನುಸರಿಸುವ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದ್ದರು. ಅನಧಿಕೃತವಾಗಿ ಕಡಿತಗೊಳಿಸಿರುವ ಹಣವನ್ನು ಮರುಪಾವತಿಸುವುದರ ಜೊತೆಗೆ, ಇಂತಹ ದೂರುಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.