ಇಂದು ವೈದ್ಯರಿಲ್ಲದೇ ಇರುತ್ತಿದ್ದರೆ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ಊಹಿಸುವುದೇ ಅಸಾಧ್ಯ. ಇಂದು ವೈದ್ಯರಿಂದಲೇ ನಮ್ಮ ಬದುಕು ಖುಷಿ ಮತ್ತು ನೆಮ್ಮದಿಯ ನಂದನವನವಾಗಿದೆ. ಆರೋಗ್ಯವನ್ನು ಮೀರಿದ ಐಶ್ವರ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಆರೋಗ್ಯವೊಂದೇ ದೊಡ್ಡ ಸಂಪತ್ತು. ಅಂತಹ ಸಂಪತ್ತನ್ನು ನಮಗೆ ನೀಡುವವರೇ ವೈದ್ಯರು. ಜುಲೈ 1 ರಾಷ್ಟ್ರೀಯ ವೈದ್ಯರ ದಿನದ ಸಂಭ್ರಮ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ ಸಲುವಾಗಿ ಈ ವೈದ್ಯರದಿನವನ್ನು ಆಚರಿಸಲಾಗುತ್ತಿದೆ. ವೈದ್ಯರ ಪ್ರಾಮುಖ್ಯತೆಯನ್ನ ಅರಿತುಕೊಳ್ಳಲು ವೈದ್ಯಕೀಯ ವೃತ್ತಿಯನ್ನು ಗೌರವಿಸುವ ಸಲುವಾಗಿ ವೈದ್ಯರ ದಿನವನ್ನು ಆಚರಿಸಿ ಅವರ ವೃತ್ತಿಯ ತ್ಯಾಗವನ್ನು ಸ್ಮರಿಸುವುದು ಈ ದಿನದ ಅವಶ್ಯಕತೆಯಾಗಿದೆ.
ವೈದ್ಯರಿದ್ದರೆ ಆರೋಗ್ಯವೇ ಭಾಗ್ಯ:
ವೈದ್ಯರೆಂದರೆ ದೇವರ ರೀತಿ. ವೈದ್ಯರು ಪ್ರಾಣ ಉಳಿಸುವ ದೇವರು. ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೇವರ ಶಕ್ತಿ ಪಡೆದು ಕಣ್ಣೆದುರಿಗೆ ನಿಲ್ಲುವ ದೇವರು ಅಲ್ಲವೇ? ಅದಕ್ಕೆ "ವೈದ್ಯೋ ನಾರಾಯಣೋ ಹರಿಃ" ಎನ್ನುವ ಮಾತು ಚಾಲ್ತಿಯಲ್ಲಿದೆ. ಸಮಾಜದಲ್ಲಿ ವೈದ್ಯರ ಸ್ಥಾನ ಮತ್ತು ಅವರ ಜವಾಬ್ದಾರಿಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ರೋಗಿಗಳು ಯಾರೊಂದಿಗೂ ಹಂಚಿಕೊಳ್ಳಲಾಗದ ವಿಷಯಗಳನ್ನು ತಮ್ಮ ವೈದ್ಯರೊಂದಿಗೆ ಹಂಚಿಕೊಳ್ಳುವಷ್ಟು ಆತ್ಮೀಯತೆಯನ್ನು ವೈದ್ಯರು ತಮ್ಮ ರೋಗಿಗಳೊಡನೆ ಹೊಂದಿರುತ್ತಾರೆ. ಇದು ವೈದ್ಯರ ಶಕ್ತಿ.
ಮಾನಸಿಕ ನೆಮ್ಮದಿ ನೀಡುವ ವೈದ್ಯರು:
ವೈದ್ಯರು ಶಾರೀರಿಕ ರೋಗವನ್ನು ಮಾತ್ರ ಗುಣಪಡಿಸುವುದಿಲ್ಲ. ತಮ್ಮ ಮಾತಿನ ಕೌಶಲ್ಯದಿಂದ, ಪ್ರೀತಿಯಿಂದ, ಧೈರ್ಯ ನೀಡಿ ಮಾನಸಿಕ ರೋಗವನ್ನು ನಿವಾರಿಸುವ ನೈಪುಣ್ಯತೆಯನ್ನು ಕೂಡ ಹೊಂದಿರುತ್ತಾರೆ. ತಮ್ಮ ಮನೆಯಲ್ಲಿ ಏನೇ ಸಮಸ್ಯೆ ಇದ್ದರೂ ತಮ್ಮ ಕರ್ತವ್ಯ ಎಂದು ಬಂದ ಕೂಡಲೇ ನಗುಮುಖದಿಂದ ಶಾಂತರೂಪಿಯಾಗಿ ಜನರ ಸೇವೆಯಲ್ಲಿ ನಿರತರಾಗುತ್ತಾರೆ ಈ ವೈದ್ಯರು. ಪ್ರತೀಯೊಬ್ಬರಿಗೂ ಸಾಮಾನ್ಯ ಕುಟುಂಬ ವೈದ್ಯರಿರುತ್ತಾರೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಲಹೆ ಸೂಚನೆಗಳನ್ನು ಅವರ ಬಳಿ ಕೇಳಿ ಧೈರ್ಯಪಡೆದುಕೊಂಡರಷ್ಟೇ ನಮಗೆ ಸಮಾಧಾನ. ನಿಜವಾದ ವೈದ್ಯರು ರೋಗಿಗಳಿಗೆ ಧೈರ್ಯ ಸ್ಪೂರ್ತಿ ನೀಡುತ್ತ ಆರೈಕೆ ಮಾಡುತ್ತಾರೆ. ನಮಗೆ ಆರೋಗ್ಯ ಎನ್ನುವ ಅಕ್ಷಯ ನಿಧಿ ನೀಡುವ ಪ್ರತೀ ವೈದ್ಯರಿಗೂ ಡಾಕ್ಟರ್ಸ್ ಡೇ ಶುಭಾಶಯಗಳು. ವೈದ್ಯರೇ ನಿಮ್ಮ ನಿಸ್ವಾರ್ಥ, ಸಾರ್ಥಕ ಸೇವೆಗೆ ನಮ್ಮ ಕಡೆಯಿಂದ ಒಂದು ದೊಡ್ಡ ಸಲಾಂ. ![MAHALASA DENTAL CLINIC.jpg]
(https://api.suddisanchalana.com/uploads/MAHALASA_DENTAL_CLINIC_b594eaff9f.jpg)
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.