ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಹೆಬ್ರಿ ಗ್ರಾಮ ಪಂಚಾಯತ್‌ಗಳ ಜಂಟಿ ಆಶ್ರಯದಲ್ಲಿ “ಮಳೆ ನೀರು ಕೊಯ್ಲು ಮತ್ತು ಮಳೆನೀರಿನ ಪುನರ್‌ಬಳಕೆ ಅರಿವು ಹಾಗೂ ಪ್ರಾತ್ಯಕ್ಷಿಕೆ” ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತರಬೇತುದಾರರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೋಸೆಫ್ ಜೆ.ಎಂ. ರೆಬೆಲ್ಲೋ ಅವರು ಮಾತನಾಡಿ, ಮಳೆ ನೀರು ಕೊಯ್ಲಿನ ಅಗತ್ಯತೆ, ಅದರ ಪ್ರಯೋಜನಗಳು ಮತ್ತು ನೀರಿನ ಸಮರ್ಪಕ ನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್‌ನ ಎಚ್.ಆರ್.ಡಿ. ಪರಿಣಿತರಾದ ಶ್ರೀಧರ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಜಿಲ್ಲಾಡಳಿತದ ನೀರಿನ ವ್ಯವಸ್ಥೆ ಹಾಗೂ ಸದ್ಬಳಕೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಿಧ್ಯಾಧರ ಎಸ್. ಹೆಗಡೆ ವಹಿಸಿ, ನೀರಿನ ಸಂರಕ್ಷಣೆಯ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಗಣೇಶ್ ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕರಾದ ಶ್ರೀಮತಿ ಸುಷ್ಮಾ ರಾವ್, ಹೆಬ್ರಿ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀ ವಾಸುದೇವ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ನಿರೂಪಿಸಿ, ಧನ್ಯವಾದ ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.