


ಮಂಗಳೂರು: ಬಂಟ್ವಾಳದ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರನ್ನು ಸಾರ್ವಜನಿಕರ ಎದುರೇ ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮಂಗಳೂರು ಸಮೀಪದ ವಾಮಂಜೂರಿನ ಪಚ್ಚನಾಡಿ ಪ್ರದೇಶದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧನದ ವೇಳೆ ವಿಷ ಸೇವಿಸಿದ್ದಾನೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿಯಾದ ಸುಮಾರು 25 ವರ್ಷದ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಉದ್ಯೋಗಿಯಾಗಿದ್ದರು. ಗುರುವಾರ ಸಂಜೆ ಸುಮಾರು 5.30ರ ವೇಳೆಗೆ ಕೆಲಸ ಮುಗಿಸಿ ಮನೆಗೆ ತೆರಳಲು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಹತ್ತಿದ್ದರು. ಇದೇ ವೇಳೆ ಬಸ್‌ಗೆ ನುಗ್ಗಿದ ಆರೋಪಿ ಚೇತನ್, ಲಾವಣ್ಯ ಅವರನ್ನು ಹೊರಗೆ ಎಳೆದುಕೊಂಡು ಬಂದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಲಾವಣ್ಯರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಚೇತನ್ ಮತ್ತು ಲಾವಣ್ಯ ಈ ಹಿಂದೆ ಪರಸ್ಪರ ಪರಿಚಯಸ್ಥರಾಗಿದ್ದು, ಕೆಲ ವರ್ಷಗಳ ಹಿಂದೆ ಇಬ್ಬರೂ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಬಳಿಕ ಸಂಬಂಧ ಮುರಿದಿದ್ದರೂ, ಮತ್ತೆ ಸಂಬಂಧ ಮುಂದುವರಿಸುವಂತೆ ಆರೋಪಿ ಒತ್ತಡ ಹೇರುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಲಾವಣ್ಯ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.