ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಲಜೀವನ್ ಮಿಷನ್ ಯೋಜನೆ ಹಾಗೂ ವಾರಾಹಿ ಯೋಜನೆ ಅನುಷ್ಠಾನದ ಕುರಿತು ಸಂಬಂದಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಎಂಬ ಘೋಷವಾಕ್ಯದೊಂದಿಗೆ ಎಲ್ಲಾ ಕುಟುಂಬಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಿದ್ದಪಡಿಸಲಾಗಿರುತ್ತದೆ. ಗ್ರಾಮ ಪಂಚಾಯತ್ ವ್ಯಾಫ್ತಿಗಳಲ್ಲಿ ಪ್ರಸ್ತುತ ಲಭ್ಯವಿರುವ ಜಲಮೂಲಗಳನ್ನು ಬಳಸಿಕೊಂಡು ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್ ಸಂಪರ್ಕಗಳನ್ನು ವಿಸ್ತರಣೆ ಮಾಡಿರುವ ಕುರಿತು ಜೊತೆಗೆ ಅತ್ಯಂತ ಮಹತ್ವಕಾಂಕ್ಷಿ ವಾರಾಹಿ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಲಾಯಿತು.
ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 62 ಓವರ್ ಹೆಡ್ ಟ್ಯಾಂಕ್‌ಗಳು, 1524.35 ಕಿ.ಮೀಟರ್ ಪೈಪ್ ಲೈನ್ ಅಳವಡಿಕೆ ಹಾಗೂ ಹೆಬ್ರಿ ತಾಲೂಕು ವ್ಯಾಫ್ತಿಯಲ್ಲಿ 23 ಓವರ್ ಹೆಡ್ ಟ್ಯಾಂಕ್‌ಗಳು, 416.25 ಕಿ.ಮೀಟರ್ ವ್ಯಾಪ್ತಿಯ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ವಾರಾಹಿ ಯೋಜನೆಯಡಿ ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ 72 ಓವರ್ ಹೆಡ್ ಕಾಮಗಾರಿಗಳು ಪೂರ್ಣಗೊಂಡಿದ್ದು ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಪ್ಟೆಂಬರ್ ಅಂತ್ಯದ ಒಳಗಾಗಿ ಎಲ್ಲಾ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಹಾಗೂ ಪೈಪ್ ಲೈನ್ ಅಳವಡಿಕೆ ಕಾಮಗಾರಿಗಳನ್ನು ಯಾವುದೇ ಸಾರ್ವಜನಿಕ ದೂರಿಗೆ ಆಸ್ಪದ ನೀಡದಂತೆ ಸರ್ಕಾರ ನಿಗದಿಪಡಿಸಿರುವ ಮೇಲ್ವಿಚಾರಣಾ ಏಜೆನ್ಸಿಯವರು ನಿರಂತರವಾಗಿ ಪರಿವೀಕ್ಷಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ವರಾಹಿ ಯೋಜನೆ ಕುರಿತಂತೆ ಚಾರ ಗ್ರಾಮದಲ್ಲಿ ಸುಮಾರು 08.00 ಲಕ್ಷ ಲೀಟರ್ ಸಾಮರ್ಥ್ಯದ ನೀರು ಪಂಪ್ ಸ್ಟೇಷನ್ ಕಾಮಗಾರಿ ಹಾಗೂ ಮಿಯ್ಯಾರು ಗ್ರಾಮದಲ್ಲಿ ಸುಮಾರು 05.50 ಲಕ್ಷ ಲೀಟರ್ ಸಾಮರ್ಥಯದ ಪಂಪ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿದ್ದು, ಸಂಪೂರ್ಣ ಗುರುತ್ವಾಕರ್ಷಣೆ ಮೂಲಕ ಓವರ್ ಹೆಡ್ ಟ್ಯಾಂಕ್ ಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದ್ದು ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಸಮರ್ಪಕ ರೀತಿಯಲ್ಲಿ ಈ ಮಹತ್ವಕಾಂಕ್ಷಿ ಯೋಜನೆಯನ್ನು ಜನರಿಗೆ ತಲುಪುವಲ್ಲಿ ಅಧಿಕಾರಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಆಗಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸುವುದಾಗಿ ತಿಳಿಸಲಾಯಿತು. ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಯವರಾದ ಶ್ರೀ ಉದಯ ಕುಮಾರ್ ಶೆಟ್ಟಿ ಗ್ರಾಮೀಣ ಕುಡಿಯುವ ನೀರು, ನ್ಯೆರ್ಮಲ್ಯ ಇಲಾಖೆ ಉಡುಪಿ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್, ಶ್ರೀ ಉದಯ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀ ಸುರೇಂದ್ರನಾಥ್, ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಕಾರ್ಯನಿರ್ವಣಾಧಿಕಾರಿಗಳಾದ ಶ್ರೀ ಪ್ರಶಾಂತ್ ರಾವ್, ಮತ್ತು ಶ್ರೀಮತಿ ವಿಜಯ, ಉಭಯ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.