


ಕಾರ್ಕಳ: ತುಳುನಾಡಿನ ಪಾರಂಪರಿಕ ಆಚರಣೆ, ನಂಬಿಕೆ ಹಾಗೂ ದೈವಾರಾಧನೆಯ ವಿಶಿಷ್ಟ ಸಂಕೇತವಾಗಿರುವ ಮುಜಿಲ್ನಾಯ ದೈವದ ಕಂಬಳ ಸಂಪ್ರದಾಯವು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಜಿಲ್ನಾಯ ದೈವದ ಕಂಬಳದ ಅಂಗವಾಗಿ "ಕಂಬಳ ಕೋರಿ " ಸಂಪ್ರದಾಯವನ್ನು ಭಕ್ತಿಭಾವದಿಂದ ನಡೆಸಲಾಯಿತು. ಬಳಿಕ ಕಂಬಳ ಗದ್ದೆಯಲ್ಲಿ ಹೋರಿ ಓಡಿಸುವ ಕ್ರಮ ನಡೆಯಿತು. ಬಂಡಿ ಪೂಕರೆ (ಪೂಕರೆ)ಯನ್ನು ಕಂಬಳ ಗದ್ದೆಯ ಮಧ್ಯಭಾಗದಲ್ಲಿ ಇರಿಸಿ, ಬಂಡಿ ಎಳೆಯುವ ಸಂಪ್ರದಾಯ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪೂಕರೆಗೆ ನೀರು, ಹಾಲು ಹಾಗೂ ಗಂಧಪ್ರಸಾದವನ್ನು ಅರ್ಪಿಸಿ ಪೂಜೆ ಸಲ್ಲಿಸಲಾಯಿತು.
ಬಳಿಕ ದೈವಕ್ಕೆ ಎಳನೀರು ಹಾಗೂ ವೀಳ್ಯ ನೀಡುವ ಧಾರ್ಮಿಕ ವಿಧಿ ನೆರವೇರಿತು. ಅಲ್ಲಿಂದ ದೈವಸ್ಥಾನಕ್ಕೆ ಆಗಮಿಸಿ ಪರ್ವ ಸಂಕ್ರಾಂತಿ ಆಚರಣೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ಈ ಸಂದರ್ಭದಲ್ಲಿ ಪಡ್ಯಾರ ಗುತ್ತಿನ ಅಶೋಕ್ ಜೈನ್, ಈದು ಗುತ್ತಿನ ಜಯರಾಜ್ ಜೈನ್, ಕೊಟ್ಟಾರಿ ಗುತ್ತಿನ ಯಶೋಧರ್, ಕಂಠಾವು ಗುತ್ತಿನ ನಮಿರಾಜ್, ಬರ್ಕೆ ಮನೆತನದವರು, ಹಿತ್ತಿಲು ಮನೆತನದ ಸೀನ ಪೂಜಾರಿ, ಒರಿಮಾರು ಬರ್ಕೆಯ ಸುರೇಶ್ ಪೂಜಾರಿ, ಭಟ್ಟಾಜೆ ಮನೆತನದ ರತ್ನ ಬೋಂಟ್ರಾ, ರಮೇಶ್ ಪಾಲಡ್ಕ ಸೇರಿದಂತೆ ವಿವಿಧ ಮನೆತನಗಳ ಪ್ರಮುಖರು, ದೈವದ ಚಾಕರಿದಾರರು, ಊರಿನ ಪ್ರಮುಖರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.