


ಕಠ್ಮಂಡು:** ಕಳೆದ 30 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ನೇಪಾಳ ತತ್ತರಿಸಿದ್ದು, ಜಲಪ್ರಳಯದಲ್ಲಿ ಸಾವಿನ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಬುಧವಾರ (ಆ.6) ಸಂಭವಿಸಿದ ಭೀಕರ ಪ್ರವಾಹದಿಂದ ದೇಶಾದ್ಯಂತ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಚಿತ್ರಾನ್, ನವಲ್ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಸಾವುನೋವು ವರದಿಯಾಗಿದೆ.
ಪ್ರವಾಹದಲ್ಲಿ ನಾಪತ್ತೆಯಾಗಿರುವವರಿಗಾಗಿ ನೇಪಾಳದ ಸೇನೆ ಹಾಗೂ ರಕ್ಷಣಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಸಕ್ಕೆ ತೆರಳಿದ್ದ 288 ಭಾರತೀಯರೂ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದ್ದು, ಈವರೆಗೆ 800ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರವಾಹದ ರಭಸಕ್ಕೆ 80ಕ್ಕೂ ಅಧಿಕ ಸೇತುವೆಗಳು ಕೊಚ್ಚಿಹೋಗಿವೆ. ಇದರಲ್ಲಿ 35 ಸಾಮಾನ್ಯ ಸೇತುವೆಗಳು ಹಾಗೂ 45 ತೂಗುಸೇತುವೆಗಳು ಸೇರಿವೆ. ರಾಜಧಾನಿ ಕಠ್ಮಂಡುವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಸೇರಿದಂತೆ ನೂರಾರು ಕಿಲೋಮೀಟರ್ ರಸ್ತೆಗಳು ನೀರಿನಲ್ಲಿ ಮುಳುಗಿವೆ.
ಹೀಗಾಗಿ ದೇಶದ ಹಲವು ಭಾಗಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೂ ಅಡಚಣೆಯಾಗಿದೆ. ನೇಪಾಳದ ಆಧುನಿಕ ಇತಿಹಾಸದಲ್ಲೇ ಇದೊಂದು ಅತ್ಯಂತ ದೊಡ್ಡ ನೈಸರ್ಗಿಕ ದುರಂತವೆಂದು ಹೇಳಲಾಗಿದೆ.
ನೇಪಾಳದ ಭೀಕರ ಪ್ರವಾಹದ ಪರಿಣಾಮ ಕರ್ನಾಟಕದ ಪ್ರವಾಸಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಮೂಲದ ಎಂಟು ಮಂದಿ ಪ್ರವಾಹದಲ್ಲಿ ಸಿಲುಕಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ ಅವರ ಸಂಪೂರ್ಣ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಹಿರಿಯ ಐಎಎಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ನೇರವಾಗಿ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಂಕಷ್ಟದಲ್ಲಿರುವ ಕನ್ನಡಿಗರ ಕುಟುಂಬಗಳಿಗೆ ನೆರವು ನೀಡಲು ಹಾಗೂ ತುರ್ತು ಮಾಹಿತಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. 1070 ಅಥವಾ 080-22253707 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.