


ನವದೆಹಲಿ: ಜುಲೈ 20 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಮೇಲೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗಾಯಾಳುವಿನ ಜೊತೆಗೆ ಅವರು ಮಾಧ್ಯಮಗಳ ಮುಂದೆ ಬಂದು ಮಾಹಿತಿ ಹಂಚಿಕೊಂಡರು. ಈ ವೇಳೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪೆಲೆಟ್ ಗನ್ ಬಳಸಿಲ್ಲ ಎಂದು ಹೇಳುತ್ತಿದೆ. ಆದರೆ ಇಲ್ಲಿ ಸಾಕ್ಷಿ ಇದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೆಲೆಟ್ಗನ್ ಬಳಕೆಯಿಂದ ಗಾಯಗೊಂಡ ಸಾಹಿಲ್ ಲೋಹ್ಚಾಬ್ (19) ಅವರನ್ನು ಮಾಧ್ಯಮಗಳ ಮುಂದೆ ಅವರು ಕರೆತಂದಿದ್ದರು. ಈ ವೇಳೆ, ಅವರ ಟೀ ಶರ್ಟ್ನ್ನು ಎತ್ತಿ ತೋಳು ಮತ್ತು ದೇಹದ ಮೇಲ್ಭಾಗದಲ್ಲಿ ಹಲವಾರು ಕಡೆ ಪೆಲೆಟ್ನಿಂದಾದ ಗಾಯದ ಗುರುತುಗಳನ್ನು ತೋರಿಸಿದರು. ಸರ್ಕಾರ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅವರು ಭಾರತದ ಭವಿಷ್ಯದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಜಾಫ್ಗಢ ನಿವಾಸಿಯಾದ ಸಾಹಿಲ್, ದೆಹಲಿ ವಿಶ್ವವಿದ್ಯಾಲಯದ ಓಪನ್ ಲರ್ನಿಂಗ್ ಸ್ಕೂಲ್ (SOL) ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ರಾಷ್ಟ್ರಧ್ವಜ ಬೀಸುತ್ತಿದ್ದ ಸಮಯದಲ್ಲಿ ಪೊಲೀಸರು ಹಾರಿಸಿದ ಪೆಲೆಟ್ಗಳಿಂದ ಅವರು ಗಾಯಗೊಂಡಿದ್ದಾರೆ. ಅವರ ಬಲಗಣ್ಣಿಗೆ ಇದರಿಂದ ಹಾನಿಯಾಗಿದೆ. ದೃಷ್ಟಿ ಸರಿಯಾಗುತ್ತದೆಯೇ ಎಂಬ ಬಗ್ಗೆ ಅವರಿಗೆ ಯಾವುದೇ ಖಚಿತತೆ ಇಲ್ಲ ಎಂದಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಕ್ಕಾಗಿ ಸಾಹಿಲ್ನಂತಹ ಸಾವಿರಾರು ಜನರ ಮೇಲೆ ಪೊಲೀಸರು ದಾಳಿ ಮಾಡಿ ಥಳಿಸಿದ್ದಾರೆ. ಅವರ ತಪ್ಪೇನು? ಅವರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದಕ್ಕೆ ಅವರು ನ್ಯಾಯ ಕೇಳುತ್ತಿದ್ದಾರೆ. ಸೋರಿಕೆಗೆ ಕಾರಣರಾದವರನ್ನು ವಜಾಗೊಳಿಸಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ಸಾಹಿಲ್ನ ಭುಜದ ಮೇಲೆ ಕೈಯಿಟ್ಟು ನುಡಿದಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಸಾಹಿಲ್ನಂತಹ ಗಾಯಾಳುಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.