logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಕರ್ನಾಟಕದ ಮೊದಲ ರಾಜ್ಯ ಉಭಯಜೀವಿಯಾಗಿ ‘ಮಲೆನಾಡಿನ ಮರಗಂತಿ ಕಪ್ಪೆ’ಗೆ ಮನ್ನಣೆ! ಭಾರತದ ಇತಿಹಾಸದಲ್ಲೇ ಮೊದಲ ರಾಜ್ಯ ಉಭಯಜೀವಿ ಎಂಬ ಹೆಗ್ಗಳಿಕೆ

ಟ್ರೆಂಡಿಂಗ್
share whatsappshare facebookshare telegram
3 Nov 2026
post image

ರಾಂ ಅಜೆಕಾರು ಕಾರ್ಕಳ

ಕಾರ್ಕಳ: ಕರ್ನಾಟಕದ ಜೀವವೈವಿಧ್ಯಕ್ಕೆ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಶೇಷ ಗೌರವದ ಗರಿ ಮೂಡಿದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಅಪರೂಪದ ‘ಮಲೆನಾಡಿನ ಮರಗಂತಿ ಕಪ್ಪೆ’ (Malabar Tree Toad)ಯನ್ನು ರಾಜ್ಯದ ಅಧಿಕೃತ ಉಭಯಜೀವಿಯಾಗಿ ಸರ್ಕಾರ ಘೋಷಿಸಿದೆ. ಅಕ್ಟೋಬರ್ 27ರಂದು ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದ್ದು, ರಾಜ್ಯ ಉಭಯಜೀವಿಯನ್ನು ಗುರುತಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಲಭಿಸಿದೆ.

‘ಪೆಟು’ (Petu) ಎಂದೇ ಪ್ರೀತಿಯಿಂದ ಕರೆಯಲ್ಪಡುವ ಈ ಕಪ್ಪೆಯ ವೈಜ್ಞಾನಿಕ ಹೆಸರು Pedostibes tuberculosus. ಪಶ್ಚಿಮ ಘಟ್ಟದ ವಿಶಿಷ್ಟ ಜೀವವೈವಿಧ್ಯದ ಪ್ರತಿನಿಧಿಯಾಗಿರುವ ಈ ಅಪರೂಪದ ಉಭಯಜೀವಿ ಮರಗಳು, ಪೊದೆಗಳು ಹಾಗೂ ಸಸ್ಯವರ್ಗದ ನಡುವೆ ವಾಸಿಸುತ್ತದೆ. ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

ಮರಗಂತಿ ಕಪ್ಪೆ ನೆಲಕ್ಕಿಂತ ಹೆಚ್ಚಾಗಿ ಮರಗಳ ಎಲೆಗಳು, ಕೊಂಬೆಗಳು, ಪೊದೆಗಳು ಹಾಗೂ ಬಳ್ಳಿಗಳ ಮೇಲೆ ವಾಸಿಸಲು ಇಷ್ಟಪಡುತ್ತದೆ. ಮರಗಳನ್ನು ಸುಲಭವಾಗಿ ಏರಲು ಮತ್ತು ಎಲೆಗಳ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುವಂತೆ ಕಾಲ್ಬೆರಳುಗಳ ತುದಿಯಲ್ಲಿ ವಿಶೇಷ ಅಂಟಿಕೊಳ್ಳುವ ಪ್ಯಾಡ್‌ಗಳಿರುತ್ತವೆ. ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣದ ವ್ಯತ್ಯಾಸವೂ ಇದರ ವಿಶೇಷತೆಯಾಗಿದೆ.

ಇವು ಮುಖ್ಯವಾಗಿ ರಾತ್ರಿಯ ವೇಳೆ ಸಕ್ರಿಯವಾಗಿದ್ದು, ಸಣ್ಣ ಕೀಟಗಳು, ನೊಣಗಳು ಸೇರಿದಂತೆ ವಿವಿಧ ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಇದರಿಂದ ನೈಸರ್ಗಿಕವಾಗಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಕಾರಿಯಾಗಿವೆ.

ಮಳೆಗಾಲದಲ್ಲಿ ಸಂತಾನೋತ್ಪತ್ತಿ :

ಮಳೆಗಾಲ ಆರಂಭವಾಗುತ್ತಿದ್ದಂತೆ ಇವುಗಳ ಸಂತಾನೋತ್ಪತ್ತಿ ಚಟುವಟಿಕೆ ಚುರುಕುಗೊಳ್ಳುತ್ತದೆ. ಗಂಡು ಕಪ್ಪೆಗಳು ವಿಶಿಷ್ಟ ಧ್ವನಿಯಲ್ಲಿ ಕೂಗುವ ಮೂಲಕ ಹೆಣ್ಣು ಕಪ್ಪೆಗಳನ್ನು ಆಕರ್ಷಿಸುತ್ತವೆ. ನೀರಿನ ಸಮೀಪದ ಸಸ್ಯವರ್ಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ಹೊರಬರುವ ಮರಿಗಳು ನೀರಿನಲ್ಲಿ ಬೆಳೆದು ಕ್ರಮೇಣ ಕಪ್ಪೆಗಳಾಗಿ ರೂಪುಗೊಳ್ಳುತ್ತವೆ.

ಕಪ್ಪೆಗಳನ್ನು ಪರಿಸರದ ಆರೋಗ್ಯವನ್ನು ಸೂಚಿಸುವ ಪ್ರಮುಖ ಜೈವಿಕ ಸೂಚಕಗಳೆಂದು ಪರಿಗಣಿಸಲಾಗುತ್ತದೆ. ಅವುಗಳ ಅಸ್ತಿತ್ವವು ಆವಾಸಸ್ಥಾನದ ಗುಣಮಟ್ಟವನ್ನು ತಿಳಿಯಲು ಸಹಕಾರಿಯಾಗಿದೆ.

ಸಂರಕ್ಷಣೆಗೆ ಹೊಸ ಪ್ರೇರಣೆ:

ಅರಣ್ಯನಾಶ, ಪರಿಸರ ಬದಲಾವಣೆ ಹಾಗೂ ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದ ಅಪರೂಪದ ಜೀವಿಗಳ ಅಸ್ತಿತ್ವಕ್ಕೆ ಸವಾಲು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮರಗಂತಿ ಕಪ್ಪೆಗೆ ರಾಜ್ಯದ ಅಧಿಕೃತ ಉಭಯಜೀವಿ ಸ್ಥಾನಮಾನ ದೊರೆತಿರುವುದು ಅದರ ಸಂರಕ್ಷಣೆ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.

. “2004ರಲ್ಲಿ ವಿನಾಶದ ಅಂಚಿನಲ್ಲಿರುವ ಕಪ್ಪೆ ಎಂದು ಗುರುತಿಸಲ್ಪಟ್ಟಿದ್ದ ಮರಗಂತಿ ಕಪ್ಪೆಯ ಕುರಿತು ಬಳಿಕ ಸುಮಾರು 17ಕ್ಕೂ ಹೆಚ್ಚು ವೀಕ್ಷಣೆಗಳು (Observations) ದಾಖಲಾಗಿವೆ. ಇದೀಗ ರಾಜ್ಯದ ಅಧಿಕೃತ ಉಭಯಜೀವಿಯಾಗಿ ಘೋಷಣೆಯಾಗಿರುವುದು ಈ ವಿಶಿಷ್ಟ ಜೀವಿಯ ಬಗ್ಗೆ ಜನರಲ್ಲಿ ಮತ್ತಷ್ಟು ಕುತೂಹಲ ಮತ್ತು ಆಸಕ್ತಿ ಮೂಡಿಸಲಿದೆ. ಈ ಗೌರವ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಮುಂದಿನ 15 ವರ್ಷಗಳಲ್ಲಿ ಪರಿಸರ ಬದಲಾವಣೆ, ಜೀವವೈವಿಧ್ಯದ ಮಹತ್ವ ಹಾಗೂ ಪ್ರಕೃತಿ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಲಿದೆ.”ಎಂದು ವಿಜ್ಞಾನಿ ,ಪರಿಸರ ತಜ್ಞರಾದ ಗುರುರಾಜ್ ಕೆ ವಿ ತಿಳಿಸಿದ್ದಾರೆ.

WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.