

ಚಿತ್ರದುರ್ಗ:*ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಲಾಗಿದೆ. ಇಲ್ಲಿಯವರೆಗೆ ಎರಡು ದಿನಗಳ ಕಾಲ ಪ್ರದೋಷ್‌ನ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲಾಗಿದೆ.
ಪ್ರದೋಷ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಎಂದು ಕೋರಿ ನಟ ದರ್ಶನ್ ಪರ ವಕೀಲರು 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಮಾಫಿ ಸಾಕ್ಷಿ ವಿರುದ್ಧ ದರ್ಶನ್ ಹಾಗೂ ವಿಜಯಲಕ್ಷ್ಮಿ ಸೇರಿದಂತೆ ಒಟ್ಟು ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಇದೀಗ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ.
ಪ್ರದೋಷ್ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಬೇರೆ ಯಾರನ್ನೂ ಭೇಟಿಯಾಗಲು ಅವಕಾಶ ನೀಡಬಾರದು ಹಾಗೂ ಯಾರೊಂದಿಗೂ ಮಾತನಾಡದಂತೆ ಸಿಆರ್ ಎಸ್ಕಾರ್ಟ್ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. Cr.P.C. ಸೆಕ್ಷನ್ 267 ಮತ್ತು BNSS ಸೆಕ್ಷನ್ 302ರ ಅಡಿಯಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಪ್ರದೋಷ್‌ನನ್ನು ನ್ಯಾಯಾಲಯಕ್ಕೆ ಕರೆತರುವುದು ಸೆಪ್ಟೆಂಬರ್ 24ರಂದು ನೀಡಿದ ನ್ಯಾಯಾಲಯದ ಆದೇಶದಂತೆ ನಡೆಯುತ್ತಿದೆ ಎಂದು ಎಸ್‌ಪಿಪಿ ಪರವಾಗಿ ಆಕ್ಷೇಪಣೆ ಸಲ್ಲಿಸಲಾಗಿದೆ. ಅಲ್ಲದೆ, ಪ್ರದೋಷ್‌ನನ್ನು ಬಾಡಿ ಕ್ಯಾಮೆರಾ ಧರಿಸಿದ ಸಿಬ್ಬಂದಿಯ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಆದೇಶ ನೀಡುವ ಸಾಧ್ಯತೆಯಿದೆ.
ಇದೇ ವೇಳೆ, ಎವಿಡೆನ್ಸ್ ಆ್ಯಕ್ಟ್‌ನ ಸೆಕ್ಷನ್ 137 ಮತ್ತು 138ರ ಅಡಿಯಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದ್ದು, ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದರ ಕುರಿತು ಮನವಿ ಮಾಡಲಾಗಿದೆ. ಈ ಅರ್ಜಿಗೆ ಎಸ್‌ಪಿಪಿ ಪರವಾಗಿ ಇಂದು ಆಕ್ಷೇಪಣೆ ಸಲ್ಲಿಸುವ ನಿರೀಕ್ಷೆಯಿದೆ.
ಮೂರು ದಿನಗಳ ವಿಚಾರಣೆಯಲ್ಲಿ ಪ್ರದೋಷ್‌ನಿಂದ ಬರೋಬ್ಬರಿ 83 ಪುಟಗಳ ಹೇಳಿಕೆ ದಾಖಲಿಸಲಾಗಿದೆ. ಇನ್ನೂ ಕೆಲವು ವಿಚಾರಗಳ ಕುರಿತು ಹೇಳಿಕೆ ದಾಖಲು ಬಾಕಿ ಇರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಲಾಗಿದೆ.
ಪ್ರದೋಷ್‌ನ ಮಾಫಿ ಸಾಕ್ಷಿ ಹೇಳಿಕೆಯಲ್ಲಿ ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗದಿದ್ದ ಕೆಲವು ವಿಚಾರಗಳು ದಾಖಲಾಗಿವೆ ಎಂದು ವರದಿಯಾಗಿದೆ. ಮುಂದಿನ ವಿಚಾರಣೆಯಲ್ಲಿ ಈ ಕುರಿತು ಮತ್ತಷ್ಟು ಹೇಳಿಕೆಗಳು ದಾಖಲಾಗುವ ಸಾಧ್ಯತೆಯಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.