


ಬೆಂಗಳೂರು:** ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ಮುಂದುವರಿದಿದ್ದು, ಅಕ್ಕಿ ದರ ಮತ್ತೆ ಹೆಚ್ಚಳವಾಗಿದೆ. ಸತತ ನಾಲ್ಕು ತಿಂಗಳಲ್ಲಿ ನಾಲ್ಕನೇ ಬಾರಿಗೆ ದರ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.
ಕೋಲಂ ಅಕ್ಕಿ ಕೆ.ಜಿ.ಗೆ ₹75ರಿಂದ ₹110ಕ್ಕೆ, ಬಾಸುಮತಿ ₹105ರಿಂದ ₹120ಕ್ಕೆ, ಜೀರಾ ರೈಸ್ ₹115ರಿಂದ ₹125ಕ್ಕೆ, ರಾಜಮುಡಿ ₹125ರಿಂದ ₹150ಕ್ಕೆ ಹಾಗೂ ಸ್ಟೀಮ್ ಅಕ್ಕಿ ₹60ರಿಂದ ₹88ಕ್ಕೆ ಏರಿಕೆಯಾಗಿದೆ.
ಸೋನಾ ಮಸೂರಿ ಅಕ್ಕಿಯ ದರವೂ ಕೆ.ಜಿ.ಗೆ ₹100ರ ಗಡಿ ತಲುಪಿದ್ದು, ಚೀಲಕ್ಕೆ ಸುಮಾರು ₹400 ಹೆಚ್ಚಳವಾಗಿದೆ. ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿ ದರ ₹390ರಿಂದ ₹400ರಷ್ಟು ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹90ರವರೆಗೆ ಮಾರಾಟವಾಗುತ್ತಿದೆ.
ಬೇಡಿಕೆಗೆ ಅನುಗುಣವಾಗಿ ಅಕ್ಕಿ ಪೂರೈಕೆಯಾಗದಿರುವುದೇ ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮುಂಗಾರು ಕೊರತೆಯಿಂದ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ಕುಂಠಿತವಾಗಿದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಇಳುವರಿ ಕಡಿಮೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ.
ಸತತ ದರ ಏರಿಕೆಯಿಂದ ಅಕ್ಕಿ ಖರೀದಿಗೆ ಬರುವ ಗ್ರಾಹಕರು ಬೆಲೆ ಕೇಳಿ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.