ಗುಜರಾತ್: ಮಗನೇ ತಾಯಿಯನ್ನು ಕೊಲೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದ ಘಟನೆ ಗುಜರಾತ್‌ನ ರಾಜ್ ಕೋಟ್‌ನ ಭಗತ್ ಸಿಂಗ್ ಜಿ ಎಸ್ಟೇಟ್ ನಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥ ತಾಯಿಯೊಂದಿಗೆ ಜಗಳವಾಡಿ ಆಕ್ರೋಶಗೊಂಡ ಪಾಪಿ ಪುತ್ರ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೆತ್ತ ತಾಯಿಯನ್ನು ಹತ್ಯೆಗೈದ ಆರೋಪಿ ನೀಲೇಶ್ ಗೋಸಾಯಿ (21). ಜ್ಯೋತಿ ಬೆನ್ ಖೋಜೈ ಮೃತ ತಾಯಿ. ಜ್ಯೋತಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈಕೆಯ ಮಾನಸಿಕ ಅಸ್ವಸ್ಥೆಯಿಂದಾಗಿ ಕಳೆದ ಒಂದು ವರ್ಷದಿಂದ ಪತಿ ಹಾಗೂ ಇತರೆ ಮಕ್ಕಳು ಆಕೆಯಿಂದ ದೂರವಾಗಿದ್ದರು.
ಇದರಿಂದಾಗಿ ನೀಲೇಶ್ ಗೋಸಾಯಿ ಮತ್ತು ಅವರ ತಾಯಿ ಜ್ಯೋತಿಪೆನ್ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಜ್ಯೋತಿಯವರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆ ನಡೆಯುವ ಒಂದು ತಿಂಗಳ ಮೊದಲು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಇದರಿಂದ ಜ್ಯೋತಿ ಬೆನ್ ಮಾನಸಿಕ ಅಸ್ವಸ್ಥರಾಗಿ ನೀಲೇಶ್ ಹಾಗೂ ಜ್ಯೋತಿ ಬೆನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೆಲವೊಮ್ಮೆ ವಾದವು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು.
ಹೀಗೆ ಇತ್ತೀಚಿಗೆ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಅತೀರೇಕಕ್ಕೆ ಹೋಗಿ ನೀಲೇಶ್ ಸಿಟ್ಟಿಗೆದ್ದು, ತಾಯಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಆದರೆ ಜ್ಯೋತಿ ಬೆನ್ ಅವನನ್ನು ತಡೆಯುತ್ತಾಳೆ. ಇದರಿಂದ ಕುಪಿತಗೊಂಡ ಮಗ ಕಂಬಳಿಯಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ತಾಯಿಯನ್ನು ಕೊಂದು ನೀಲೇಶ್ ಶವದ ಮುಂದೆ ಸಮಯ ಕಳೆದಿದ್ದಾನೆ. ಬಳಿಕ ತನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಮೃತ ದೇಹದೊಂದಿಗೆ ಫೋಟೋ ತೆಗೆದು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ, “ಅಮ್ಮಾ ನಾನು ನಿನ್ನನ್ನು ಕೊಂದಿದ್ದೇನೆ. ನನ್ನನ್ನು ಕ್ಷಮಿಸು, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ.. ಅಮ್ಮ. "ಓಂ ಶಾಂತಿ" ಎಂದು ಬರೆದುಕೊಂಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೀಲೇಶ್ ಜ್ಯೋತಿ ಬೆನ್ ಮೃತದೇಹದೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಂಧಿತ ನಿಲೇಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.